ಪುದೀನ
ಲ್ಯಾಮಿಯೇಸೀ (ಲೇಬಿಯೇಟೀ) ಕುಟುಂಬಕ್ಕೆ ಸೇರಿದ ಜನಪ್ರಿಯ ಮೂಲಿಕೆ ಸಸ್ಯ. ಮೆಂತ ಇದರ ವೈಜ್ಞಾನಿಕ ಹೆಸರು. ಇದರಲ್ಲಿ ಹಲವಾರು ಪ್ರಭೇದಗಳಿವೆ. ಇವುಗಳ ನಡುವಣ ವ್ಯತ್ಯಾಸಗಳು ಅಷ್ಟಿಲ್ಲವಾಗಿ ಇದನ್ನು ಪತ್ತೆ ಹಚ್ಚುವುದು ಕಷ್ಟದ ಕಾರ್ಯ. ಭಾರತದಲ್ಲಿ ಸುಮಾರು 6 ಪ್ರಭೇದಗಳುಂಟು. ಇದರಲ್ಲಿ 3-4 ಪ್ರಭೇದಗಳನ್ನು ಎಣ್ಣೆಗಾಗಿ, ಔಷಧಿಗಾಗಿ ತರಕಾರಿಯಾಗಿ ಬಳಸುವುದಕ್ಕಾಗಿ ಬೆಳೆಸಲಾಗುತ್ತದೆ.
ಇವೆಲ್ಲಕ್ಕೂ ಪುದೀನ ಎಂಬ ಹೆಸರೇ ಇದೆ. ಇವುಗಳ ಪೈಕಿ ಮುಖ್ಯವಾದವು ಮೆಂತ ಅರ್ವೆನ್ನಿಸ್ (ಫೀಲ್ದ್ ಮಿಂಟ್, ಕಾರ್ನ್‍ಮಿಂಟ್-ಚಟ್ನಿ ಮುರುಗ), ಮೆಂತ ಸ್ಟೈಕೇಟ (ಸ್ಪೀಯರ್ ಮಿಂಟ್), ಮೆಂತ ಲಾಂಜಿಪೋಲಿಯ (ಹಾರ್ಸ್‍ಮಿಂಟ್) ಮತ್ತು ಮೆಂತ ಪೈಪರೆಟ (ಪೆಪರ್‍ಮಿಂಟ್-ವಿಲಾಯಿತಿ ಪುದೀನ).
ಎಲ್ಲ ಪ್ರಭೇದಗಳೂ ಹೆಚ್ಚು ಕಡಿಮೆ 30-90 ಸೆಂ.ಮೀ. ಎತ್ತರಕ್ಕೆ ಬೆಳೆಯುವ ಮೂಲಿಕೆಗಳು. ಬಹುಪಾಲು ಬಗೆಗಳೂ ಸಮಶೀತೋಷ್ಣವಲಯ ವಾಸಿಗಳು. ಭಾರತದಲ್ಲಿ ಕಾಶ್ಮೀರ, ಪಂಜಾಬ್, ಕುಮಾಂವ್ ಮುಂತಾದ ಪ್ರದೇಶಗಳಲ್ಲಿ ಬೆಳೆಯುವುವು. ಪೈಪರಿಟಿ ಪ್ರಭೇದವನ್ನು ನೀಲಗಿರಿ ಮತ್ತು ಕರ್ನಾಟಕದ ಕೆಲವೆಡೆಗಳಲ್ಲಿ ಬೆಳೆಸಲಾಗಿದೆ. ಎಲೆಗಳು 2,5-10 ಸೆಂ.ಮೀ. ಉದ್ದ ಇರುವುದುಂಟು. ಎಲೆಗಳ ಆಕಾರ ಅಂಡದಂತೆ, ಅಂಚು ಗರಗಸದಂತೆ ಇವೆ. ಹೂಗಳೂ ಚಿಕ್ಕವು. ಸುವಾಸನಾಯುಕ್ತ ಚಂಚಲ ತೈಲವಿದೆ. ಎಲೆಗಳ ಕಕ್ಷಗಳಲ್ಲಿ ಗುಂಪುಗುಂಪಾಗಿ ಅರಳುವುವು. ಎಲೆ ಹಾಗೂ ಕಾಂಡಗಳಲ್ಲಿ ಸುವಾಸನೆಯುಕ್ತ ಚಂಚಲ ತೈಲ ಇದೆ. ಎಲೆ ಹಾಗೂ ಕಾಂಡಗಳಲ್ಲಿ ಗಿಡದ ಪರಿಮಳಕ್ಕೆ ಈ ತೈಲವೇ ಕಾರಣ. 
ಪುದೀನದ ಎಲೆಗಳನ್ನು ಚಟ್ನಿ ಮುಂತಾದ ಖಾದ್ಯ ವಸ್ತುಗಳ ತಯಾರಿಕೆಗೆ ಬಳಸಲಾಗುತ್ತದೆ. ಅಲ್ಲದೆ ಇವಕ್ಕೆ ಉತ್ತೇಜಕ, ಜೀರ್ಣಕಾರಿ, ಬಂಧಕ ಗುಣಗಳಿವೆ. ಪುದೀನದ ತೈಲದಿಂದ ಮೆಂತಾಲ್ ಎಂಬ ವಸ್ತುವನ್ನು ತೆಗೆಯುವುದುಂಟು. ಔಷಧಿಗಳಿಗೆ ದಂತಧಾವನ ಪದಾರ್ಥಗಳಿಗೆ ಕೆಮ್ಮಿನ ಗುಳಿಗೆ, ಚೂಯಿಂಗ್‍ಗಮ್, ಸಿಹಿ ತಿನಿಸುಗಳು, ಮಾದಕ ಪಾನೀಯಗಳಿಗೆ ವಾಸನೆ ಕಟ್ಟಲು ಪುದೀನದ ತೈಲವನ್ನು ಬಳಸಲಾಗುತ್ತದೆ. ಮೆಂತಾಲನ್ನೂ ಪೆಪರ್‍ಮೆಂಟ್ ತೈಲವನ್ನು ಅಮೆರಿಕ, ಫ್ರಾನ್ಸ, ಜಪಾನ್, ಇಂಗ್ಲೆಂಡ್ ಮುಂತಾದ ದೇಶಗಳಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ.
(ಟಿ.ಎಸ್.ಸಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ